ಡಾ. ಶ್ಯಾಮ್ ಎನ್. ಗುಪ್ತಾ

ಕನ್ನಡ

ಐವಿಎಫ್ ಎಂದರೇನು?

ಇನ್ ವಿಟ್ರೊ ಫರ್ಟಿಲೈಸೇಶನ್ — ದೇಹದ ಹೊರಗೆ, ಪ್ರಯೋಗಾಲಯದಲ್ಲಿ ಅಂಡಾಣು ಮತ್ತು ವೀರ್ಯಾಣುವನ್ನು ಸೇರಿಸಿ ಭ್ರೂಣ ಬೆಳೆಸಿ, ನಂತರ ಅದನ್ನು ಗರ್ಭಕೋಶಕ್ಕೆ ಇಡುವ ಚಿಕಿತ್ಸೆ. ಇಲ್ಲಿ ಇಡೀ ಪ್ರಕ್ರಿಯೆ ಹಂತ ಹಂತವಾಗಿ.

ಮೂಲ

ಸರಳವಾಗಿ ಹೇಳಬೇಕೆಂದರೆ

ಸಾಮಾನ್ಯ ಗರ್ಭಧಾರಣೆಯಲ್ಲಿ ಅಂಡಾಣು ಮತ್ತು ವೀರ್ಯಾಣು ಫಲೋಪಿಯನ್ ಟ್ಯೂಬ್‌ನಲ್ಲಿ ಸೇರುತ್ತವೆ. ಟ್ಯೂಬ್ ಮುಚ್ಚಿದ್ದರೆ, ವೀರ್ಯಾಣುಗಳ ಸಂಖ್ಯೆ ಕಡಿಮೆ ಇದ್ದರೆ, ಅಥವಾ ಅಂಡೋತ್ಪತ್ತಿ ಸರಿಯಾಗಿ ಆಗದಿದ್ದರೆ ಆ ಭೇಟಿ ನಡೆಯುವುದಿಲ್ಲ.

ಐವಿಎಫ್ ಆ ಭೇಟಿಯನ್ನು ಪ್ರಯೋಗಾಲಯಕ್ಕೆ ಸ್ಥಳಾಂತರಿಸುತ್ತದೆ. ಅಂಡಾಣುಗಳನ್ನು ಹೊರತೆಗೆದು, ವೀರ್ಯಾಣುವಿನೊಂದಿಗೆ ಸೇರಿಸಿ, ಭ್ರೂಣ ಬೆಳೆದ ಮೇಲೆ ಗರ್ಭಕೋಶಕ್ಕೆ ಹಿಂತಿರುಗಿಸಲಾಗುತ್ತದೆ. ಉಳಿದೆಲ್ಲವೂ — ಭ್ರೂಣ ನೆಲೆಗೊಳ್ಳುವುದು, ಬೆಳೆಯುವುದು, ಜನನ — ದೇಹದೊಳಗೇ ನಡೆಯುತ್ತದೆ.

ಹಂತಗಳು

ಹಂತ ಹಂತವಾಗಿ ಐವಿಎಫ್ ಚಿಕಿತ್ಸೆ

1. ಪ್ರಚೋದನೆ

ಸುಮಾರು 10 ರಿಂದ 12 ದಿನ ಪ್ರತಿದಿನ ಇಂಜೆಕ್ಷನ್. ಒಂದೇ ಅಂಡಾಣುವಿನ ಬದಲು ಹಲವು ಅಂಡಾಣುಗಳು ಬೆಳೆಯುವಂತೆ ಮಾಡುವುದು ಇದರ ಉದ್ದೇಶ. ನಡುವೆ ಸ್ಕ್ಯಾನ್ ಮತ್ತು ರಕ್ತ ಪರೀಕ್ಷೆ.

2. ಅಂಡಾಣು ಸಂಗ್ರಹಣೆ

ಸಣ್ಣ ಅರಿವಳಿಕೆಯಡಿ, ಸ್ಕ್ಯಾನ್ ಮಾರ್ಗದರ್ಶನದಲ್ಲಿ, ಸುಮಾರು 15 ರಿಂದ 20 ನಿಮಿಷಗಳ ಪ್ರಕ್ರಿಯೆ. ಕೊಯ್ತ ಇಲ್ಲ, ಹೊಲಿಗೆ ಇಲ್ಲ. ಅದೇ ದಿನ ಮನೆಗೆ.

3. ಫಲೀಕರಣ

ಅಂಡಾಣು ಮತ್ತು ವೀರ್ಯಾಣುವನ್ನು ಒಟ್ಟಿಗೆ ಇಡಲಾಗುತ್ತದೆ. ವೀರ್ಯಾಣುಗಳ ಗುಣಮಟ್ಟ ಕಡಿಮೆ ಇದ್ದರೆ ಒಂದು ವೀರ್ಯಾಣುವನ್ನು ನೇರವಾಗಿ ಅಂಡಾಣುವಿನೊಳಗೆ ಚುಚ್ಚಲಾಗುತ್ತದೆ — ಅದೇ ಐಸಿಎಸ್‌ಐ.

4. ಭ್ರೂಣ ಬೆಳವಣಿಗೆ

ಮೂರರಿಂದ ಐದು ದಿನ ಇನ್ಕ್ಯುಬೇಟರ್‌ನಲ್ಲಿ. ಐದನೇ ದಿನಕ್ಕೆ ತಲುಪುವ ಭ್ರೂಣವನ್ನು ಬ್ಲಾಸ್ಟೊಸಿಸ್ಟ್ ಎನ್ನುತ್ತಾರೆ. ಎಲ್ಲ ಭ್ರೂಣಗಳೂ ಅಲ್ಲಿಯವರೆಗೆ ತಲುಪುವುದಿಲ್ಲ — ಅದು ಸಹಜ.

5. ವರ್ಗಾವಣೆ

ತೆಳುವಾದ ಕ್ಯಾತಿಟರ್ ಮೂಲಕ ಭ್ರೂಣವನ್ನು ಗರ್ಭಕೋಶಕ್ಕೆ ಇಡಲಾಗುತ್ತದೆ. ಅರಿವಳಿಕೆ ಬೇಕಿಲ್ಲ, ನೋವಿಲ್ಲ, ಕೆಲವೇ ನಿಮಿಷ. ಅಂದೇ ಅಥವಾ ಮುಂದಿನ ಚಕ್ರದಲ್ಲಿ ಘನೀಕೃತ ಭ್ರೂಣವಾಗಿಯೂ ಮಾಡಬಹುದು.

6. ಪರೀಕ್ಷೆ

ವರ್ಗಾವಣೆಯಾದ ಸುಮಾರು 12 ರಿಂದ 14 ದಿನಗಳ ನಂತರ ರಕ್ತ ಪರೀಕ್ಷೆ. ಮನೆಯ ಮೂತ್ರ ಪರೀಕ್ಷೆ ಬೇಗ ಮಾಡಿದರೆ ತಪ್ಪು ಫಲಿತಾಂಶ ಬರಬಹುದು — ದಿನಾಂಕದವರೆಗೆ ಕಾಯುವುದು ಒಳ್ಳೆಯದು.

ವ್ಯತ್ಯಾಸ

ಐವಿಎಫ್ ಮತ್ತು ಐಸಿಎಸ್‌ಐ ಬೇರೆ ಬೇರೆಯೇ?

ಎರಡೂ ಒಂದೇ ಚಕ್ರದ ಭಾಗ. ವ್ಯತ್ಯಾಸ ಇರುವುದು ಫಲೀಕರಣದ ಹಂತದಲ್ಲಿ ಮಾತ್ರ. ಸಾಮಾನ್ಯ ಐವಿಎಫ್‌ನಲ್ಲಿ ಸಾವಿರಾರು ವೀರ್ಯಾಣುಗಳನ್ನು ಅಂಡಾಣುವಿನ ಸುತ್ತ ಬಿಟ್ಟು ಅವುಗಳಲ್ಲಿ ಒಂದು ಒಳಹೊಗುವಂತೆ ಬಿಡಲಾಗುತ್ತದೆ.

ಐಸಿಎಸ್‌ಐನಲ್ಲಿ ಭ್ರೂಣಶಾಸ್ತ್ರಜ್ಞರು ಒಂದೇ ವೀರ್ಯಾಣುವನ್ನು ಆರಿಸಿ ಸೂಕ್ಷ್ಮ ಸೂಜಿಯಿಂದ ಅಂಡಾಣುವಿನೊಳಗೆ ಇಡುತ್ತಾರೆ. ವೀರ್ಯಾಣುಗಳ ಸಂಖ್ಯೆ ಅಥವಾ ಚಲನೆ ಕಡಿಮೆ ಇದ್ದಾಗ, ಹಿಂದೆ ಫಲೀಕರಣ ಆಗದಿದ್ದಾಗ, ಅಥವಾ ಟೆಸಾ ಮೂಲಕ ವೀರ್ಯಾಣು ತೆಗೆದಾಗ ಇದು ಬೇಕಾಗುತ್ತದೆ.

ಎಚ್ಚರಿಕೆ

ಎಲ್ಲರಿಗೂ ಐವಿಎಫ್ ಬೇಕಾಗಿಲ್ಲ

ಇದು ಮುಖ್ಯವಾದ ಮಾತು. ಐವಿಎಫ್ ಎಲ್ಲ ಬಂಜೆತನಕ್ಕೂ ಮೊದಲ ಉತ್ತರವಲ್ಲ. ಹಲವು ದಂಪತಿಗಳಿಗೆ ಅಂಡೋತ್ಪತ್ತಿ ಸರಿಪಡಿಸುವುದು, ಥೈರಾಯ್ಡ್ ಸರಿಪಡಿಸುವುದು, ತೂಕ ಇಳಿಸುವುದು ಅಥವಾ ಐಯುಐ ಸಾಕಾಗುತ್ತದೆ.

ಮೊದಲ ಸಮಾಲೋಚನೆಯಲ್ಲಿ ಕೇಳಬೇಕಾದ ಪ್ರಶ್ನೆ “ಐವಿಎಫ್ ಮಾಡೋಣವೇ?” ಅಲ್ಲ — “ನನ್ನ ವಿಷಯದಲ್ಲಿ ನಿಜವಾದ ಸಮಸ್ಯೆ ಏನು?” ಎಂಬುದು. ಕಾರಣ ಗೊತ್ತಾದ ಮೇಲೆ ಚಿಕಿತ್ಸೆ ತಾನಾಗಿಯೇ ಸ್ಪಷ್ಟವಾಗುತ್ತದೆ.

ಪ್ರಶ್ನೆಗಳು

ಐವಿಎಫ್ ಬಗ್ಗೆ ಸಾಮಾನ್ಯ ಪ್ರಶ್ನೆಗಳು

ಒಂದು ಐವಿಎಫ್ ಚಕ್ರಕ್ಕೆ ಎಷ್ಟು ದಿನ ಬೇಕು?
ಮೊದಲ ಇಂಜೆಕ್ಷನ್‌ನಿಂದ ಅಂಡಾಣು ಸಂಗ್ರಹಣೆಯವರೆಗೆ ಸಾಮಾನ್ಯವಾಗಿ 12 ರಿಂದ 14 ದಿನ. ಅದೇ ಚಕ್ರದಲ್ಲಿ ವರ್ಗಾವಣೆ ಮಾಡಿದರೆ ಇನ್ನೂ ಮೂರರಿಂದ ಐದು ದಿನ. ಘನೀಕೃತ ಭ್ರೂಣ ವರ್ಗಾವಣೆಯಾದರೆ ಅದು ಮುಂದಿನ ಚಕ್ರಕ್ಕೆ ಹೋಗುತ್ತದೆ.
ಐವಿಎಫ್ ಇಂಜೆಕ್ಷನ್‌ಗಳು ನೋವಿನವೇ?
ಅವು ಚರ್ಮದ ಕೆಳಗೆ ಕೊಡುವ ಸಣ್ಣ ಸೂಜಿಗಳು — ಸಕ್ಕರೆ ಕಾಯಿಲೆಗೆ ಇನ್ಸುಲಿನ್ ಕೊಡುವಂತೆ. ಹೆಚ್ಚಿನವರು ಅದನ್ನು ಮನೆಯಲ್ಲೇ ತಾವೇ ಹಾಕಿಕೊಳ್ಳುತ್ತಾರೆ. ಹೊಟ್ಟೆ ಉಬ್ಬರ ಮತ್ತು ಆಯಾಸ ಸಾಮಾನ್ಯ; ತೀವ್ರ ನೋವು ಸಾಮಾನ್ಯವಲ್ಲ, ಅದನ್ನು ತಕ್ಷಣ ತಿಳಿಸಬೇಕು.
ಅಂಡಾಣು ಸಂಗ್ರಹಣೆಯಿಂದ ಮುಂದೆ ಅಂಡಾಣುಗಳು ಖಾಲಿಯಾಗುತ್ತವೆಯೇ?
ಇಲ್ಲ. ಪ್ರತಿ ತಿಂಗಳು ಹಲವು ಅಂಡಾಣುಗಳು ಬೆಳೆಯಲು ಆರಂಭಿಸಿ ಒಂದು ಮಾತ್ರ ಪಕ್ವವಾಗುತ್ತದೆ; ಉಳಿದವು ತಾನಾಗಿಯೇ ನಾಶವಾಗುತ್ತವೆ. ಪ್ರಚೋದನೆ ಆ ತಿಂಗಳ ಗುಂಪನ್ನು ಉಳಿಸಿಕೊಳ್ಳುತ್ತದೆ ಅಷ್ಟೇ. ಭವಿಷ್ಯದ ಸಂಗ್ರಹ ಕಡಿಮೆಯಾಗುವುದಿಲ್ಲ.
ಐವಿಎಫ್ ಮಗು ಸಾಮಾನ್ಯ ಮಗುವಿನಂತೆಯೇ ಇರುತ್ತದೆಯೇ?
ಹೌದು. ವ್ಯತ್ಯಾಸ ಇರುವುದು ಫಲೀಕರಣ ಎಲ್ಲಿ ನಡೆಯಿತು ಎಂಬುದರಲ್ಲಿ ಮಾತ್ರ. ಗರ್ಭಧಾರಣೆ, ಬೆಳವಣಿಗೆ ಮತ್ತು ಜನನ ಉಳಿದೆಲ್ಲ ಗರ್ಭಧಾರಣೆಗಳಂತೆಯೇ.
ಎಷ್ಟು ಬಾರಿ ಐವಿಎಫ್ ಮಾಡಬಹುದು?
ಕಾನೂನಿನಲ್ಲಿ ಚಕ್ರಗಳ ಮಿತಿ ಇಲ್ಲ, ಆದರೆ ಪ್ರತಿ ವಿಫಲ ಚಕ್ರದ ನಂತರ ಕಾರಣ ಹುಡುಕದೆ ಮುಂದುವರಿಯುವುದು ಸರಿಯಲ್ಲ. ಎರಡು ಚಕ್ರಗಳು ವಿಫಲವಾದರೆ ಮೂರನೆಯದನ್ನು ಆರಂಭಿಸುವ ಮೊದಲು ಪೂರ್ಣ ಮರುಪರಿಶೀಲನೆ ಆಗಬೇಕು.
ಐವಿಎಫ್‌ನಲ್ಲಿ ಮಗುವಿನ ಲಿಂಗ ಆಯ್ಕೆ ಮಾಡಬಹುದೇ?
ಇಲ್ಲ. ಪಿಸಿಪಿಎನ್‌ಡಿಟಿ ಕಾಯ್ದೆ 1994ರ ಪ್ರಕಾರ ಭಾರತದಲ್ಲಿ ಇದು ಸಂಪೂರ್ಣವಾಗಿ ಕಾನೂನುಬಾಹಿರ. ಯಾವುದೇ ಕೇಂದ್ರ ಇದನ್ನು ಸೂಚಿಸಿದರೆ ಅಲ್ಲಿಂದ ದೂರ ಇರುವುದೇ ಒಳ್ಳೆಯದು.

ಮತ್ತಷ್ಟು

ಸಂಬಂಧಿತ ಪುಟಗಳು

ಸಂಪರ್ಕ

ಸಮಯ ನಿಗದಿಪಡಿಸಲು

ಫೋನ್ ಅಥವಾ ವಾಟ್ಸ್‌ಆ್ಯಪ್ ಮಾಡಿ — ಎರಡಕ್ಕೂ ಒಂದೇ ಸಂಖ್ಯೆ. ವರದಿಗಳನ್ನು ಮೊದಲೇ ಕಳುಹಿಸಿದರೆ ಮೊದಲ ಮಾತುಕತೆಯಲ್ಲೇ ಕೆಲಸದ ಮಾತು ಆಗುತ್ತದೆ.